ಸರಕ್ಸೀಸ್
	ಪರ್ಷಿಯ ದೇಶದ ಅಕೇಮೆನಿಡ್ ವಂಶದ ಪ್ರಸಿದ್ಧ ದೊರೆ(ಕ್ರಿ.ಪೂ.486-65). ಒಂದನೆಯ ಡೇರಿಯಸ್ ಈತನ ತಂದೆ. ಸರಕ್ಸೀಸ್ ಅಖಂಡ ಪರ್ಷಿಯನ್ ಸಾಮ್ರಾಜ್ಯ ಸ್ಥಾಪಿಸಬೇಕೆಂಬ ಉದ್ದೇಶ ದಿಂದ ಸಿಂಹಾಸನವೇರಿ ಅನೇಕ ಯುದ್ಧಗಳನ್ನು ಕೈಗೊಂಡ. ತನ್ನ ತಂದೆಯಂತೆ ಇವನೂ ಈಜಿಪ್ಟಿನ ದಂಗೆ ಅಡಗಿಸಿ, ಅಲ್ಲಿಗೆ ತನ್ನ ಸೋದರ ಅಕೇಮೆನಸ್‍ನನ್ನು ನೇಮಿಸಿದ. ಇವನು ಜ್ಞಾನಿಯೂ ಹಿಂದಿನ ನಾಗರಿಕ ಜೀವನಕ್ಕೆ ಹೊಂದಿಕೊಳ್ಳುವ ಪ್ರವೃತ್ತಿಯವನೂ ಆಗಿದ್ದ. ರಾಜಕೀಯಕ್ಕೆ ಧರ್ಮವನ್ನು ಬೆರೆಸಬಾರದೆಂಬುದು ಈತನ ನಿಲುವು. ತಾನು ಯಾವುದೇ ಒಂದು ಧರ್ಮದವನಾಗಿರದೆ ಸಮಸ್ತ ಪರ್ಷಿಯ ದೇಶದ ಅರಸನೆಂದು ಹೇಳಿಕೊಳ್ಳುತ್ತಿದ್ದ.	
												(ಜಿ.ವಿ.ಆರ್.)

	ಇವನ ಆಳಿಕೆಯ ಮುಖ್ಯ ಘಟನೆ ದಂಗೆಯೆದ್ದ ಅಯೋನಿಯನ್ನರಿಗೆ ಗ್ರೀಕರು ಸಹಾಯಮಾಡಿದುದಕ್ಕೆ ಮ್ಯಾರಥಾನ್ ಕದನದಲ್ಲಿ ಇವರನ್ನು ಸೋಲಿಸಿದ್ದು(ಕ್ರಿ.ಪೂ.483). ಆಥಾಸ್ ಬೆಟ್ಟದ ಪರ್ಯಾಯ ದ್ವೀಪ ಕೊಲ್ಲಿ ಮೂಲಕ ಹಾದು ಹೋಗುವಂತೆ ಕಾಲುವೆ ತೋಡಿಸಿದ ಇವನು ಥ್ರೇಸ್ ರಾಜ್ಯದೊಡನೆಯೂ ಒಪ್ಪಂದ ಮಾಡಿಕೊಂಡ. ಇದರಿಂದ ಗ್ರೀಸಿನ ಆರ್ಗಾಸ್ ಪ್ರದೇಶ ಪರ್ಷಿಯಕ್ಕೆ ಸೇರಿದ್ದರಿಂದ ಸೈನ್ಯವನ್ನು ಹೆಚ್ಚಿಸಿ ಕೊಂಡ. ಸಾರ್ಡಿಸ್ ಎಂಬ ಸ್ಥಳದಿಂದ ಯುದ್ಧಕ್ಕೆ ಹೊರಟು ಆರ್ಟಿ ಮಿಸಿಯಂ ಎಂಬಲ್ಲಿ ಗ್ರೀಕ್ ನೌಕಾಬಲ ಸೋತಿತಲ್ಲದೆ ಥೆರ್ಮಪೊಲೆ ಎಂಬ ಪ್ರದೇಶ ನಾಶವಾಯಿತು. ಗ್ರೀಕರಿಂದ ಅಥೆನ್ಸ್ ಪಟ್ಟಣವನ್ನು ವಶಪಡಿಸಿಕೊಂಡು ಕಾರಿಂತ್ ಕೊಲ್ಲಿವರೆಗೂ ಹಿಮ್ಮೆಟ್ಟಿಸಿದ. ಈತ ಥೆಮಿಸ್ಟೊಕ್ಲಿಸ್ ಎಂಬ ಗ್ರೀಕನ ಸಲಹೆಯಂತೆ ಗ್ರೀಕ್ ನೌಕಾದಳದ ಮೇಲೆ ಆಕ್ರಮಣ ನಡೆಸಿ ಸಾಲಮಿಸ್ ಎಂಬಲ್ಲಿ ಕೊನೆಗೊಳಿಸಿದ. ಇವನು ಏಷಿಯಾದೊಂದಿಗೆ ಸಮುದ್ರ ಮೂಲಕ ಸಂಪರ್ಕ ಇಟ್ಟುಕೊಳ್ಳ ಲಾಗದೆ ಸಾರಡಿಸ್ ಎಂಬ ಸ್ಥಳಕ್ಕೆ ಹೋಗಬೇಕಾಯಿತು. ಮಾರ್ಡೋನಿ ಯಸ್‍ನ ಅಧೀನದಲ್ಲಿದ್ದ ಪರ್ಷಿಯ ಸೈನ್ಯ ಪ್ಲಟಿ, ಮೈಕೇಲ್ ಎಂಬಲ್ಲಿ ಸೋತ ಮೇಲಂತೂ ಏಷಿಯದ ಗ್ರೀಕ್ ಪಟ್ಟಣಗಳು ಪ್ರಗತಿಗೊಂಡವು. ಈ ಘಟನೆಯ ಅನಂತರ ಸರಕ್ಸೀಸನ ವಿಚಾರ ಹೆಚ್ಚಾಗಿ ತಿಳಿಯುವುದಿಲ್ಲ. ಇವನ ಅಂತಃಪುರದಲ್ಲಿ ಪಿತೂರಿಗಳು ಹೆಚ್ಚಾದುವು. ಇವನ ಶಾಸನಗಳು ಪರ್ಸಿಪೋಲಿಸ್ ಎಂಬ ಪಟ್ಟಣಗಳಲ್ಲಿ ದೊರತಿವೆ. ಇಲ್ಲಿ ಇವನ ತಂದೆ ಡೇರಿಯಸ್ ಕಟ್ಟಿಸಿದ ಅರಮನೆಯ ಜೊತೆಗೆ ತಾನು ಹೊಸ ಅರಮನೆ ಕಟ್ಟಿಸಿದ. ಅನಂತರ ಇವನ ವಜೀರ ಆರ್ಟಬ್ಯಾನಸ್ ಇವನನ್ನು ಕೊಂದು ಒಂದನೆಯ ಆರ್ಟಸರಕ್ಸೀಸ್‍ನನ್ನು ಸಿಂಹಾಸನಕ್ಕೆ ಏರಿಸಿದ (ಕ್ರಿ.ಪೂ.465).											    
(ಕೆ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ